ಶುಭ ಹಾರೈಕೆ
"ಮಗಾ, ನನ್ ಮದುವೆ ಸೆಟ್ ಆಯ್ತು. ಹುಡುಗಿ ಹೆಸ್ರು ವನಿತಾ ಅಂತ ಮಗಾ"
ದೂರವಾಣಿಯಲ್ಲಿ ರಂಜಿತ್ ಈ ಮಾತನ್ನ ನುಡಿದಾಗ, ಅವನಿಗಾಗಿದ್ದ ಸಂತೋಷ ನಾ ಊಹಿಸಬಲ್ಲೆ. ಇಲ್ಲಿವರೆಗೂ, ಅವರ ತಾಯಿಗೆ ಒಳ್ಳೆ ಮಗನಾಗಿ, ಅಕ್ಕಂದರಿಗೆ ಒಳ್ಳೆ ತಮ್ಮನಾಗಿ, cousinsಗೆ ಒಳ್ಳೆ ಅಣ್ಣನಾಗಿ, ನನ್ನಂತವರಿಗೆ ಪರಮಾಪ್ತ ಗೆಳೆಯನಾಗಿ, ಪ್ರತಿ ಸಂಬಂಧವನ್ನು ಅತ್ಯುತ್ಕೃಷ್ಟವಾಗಿ ನಿಭಾಯಿಸಿಕೊಂಡು ಬಂದಿರುವ ರಂಜಿತ್, ಈಗ ವನಿತಾರ ಗಂಡನಾಗಿ, ಯಾವ ಹೊಸ ಮಾದರಿ ಹುಟ್ಟುಹಾಕುವನೆಂದು ನೆನೆದು ರೋಮಾಂಚನವಾಯಿತು.
ಹೊಸ ಬಾಳಿನ ಹೊಸಿಲನು ಈಗಷ್ಟೇ ದಾಟಿರುವ ನವದಂಪತಿಗಳಿಗೆ, ಹಾಡಿನ ರೂಪದಲ್ಲಿ ಹಾರೈಸುವ ಪ್ರಯತ್ನ ನನ್ನದು.ಸಿನಿಮಾ ಹಾಡು ಅಂದರೆ ಇಷ್ಟ ಪಡುವ ರಂಜಿತನಿಗೆ, ಸಿನಿಮಾ ಹಾಡಿನ ರೂಪದಲ್ಲೇ ನನ್ನ ಹಾರೈಕೆ... ಇದೋ ..
("ಸಂಜು ಮತ್ತು ಗೀತಾ" ಹಾಡಿನ ಧಾಟಿ)
ರಂಜಿತ್ ಮತ್ತು ವನಿತಾ
ಸೇರಬೇಕು ಅಂತ
ಬರೆದಾಗಿದೆ ಲಗ್ನ ಪತ್ರಿಕೆ
ಖುಷಿ ಎಂದಿಗಿಂತಾ
ದುಪ್ಪಟ್ಟಾಗಲಂತ
ನಮ್ಮೆಲ್ಲರ ಶುಭ ಹಾರೈಕೆ
ನಗುವೆಂಬ ಹೂವನ್ನು, ಮುಡಿಯಲಿ ನಿಮ್ಮ ಬದುಕಿನ್ನು
ಆನಂದ ಬೆಳಗಿರಲಿ, ಚೆಲ್ಲುತ ನಿಮ್ಮ ಹೊಳಪನ್ನು
ಮಧುರ ಹನಿ ಮಧುವಾಗುವಾ ತರವೇ
ಸುಖ ಸೇರುತಾ ಸೊಗಸಾಗಲಿ ಬಾಳುವೆ
ರಂಜಿತ್ ಮತ್ತು ವನಿತಾ
ಸೇರಬೇಕು ಅಂತ
ಬರೆದಾಗಿದೆ ಲಗ್ನ ಪತ್ರಿಕೆ
ಸಂಸಾರದಲ್ಲಿ ಸುಖವೊಂದೇ ಇರಲಿ
ಉತ್ಸಾಹವೆಂದೂ ಚಿಮ್ಮುತ್ತ ಬರಲಿ
ಅನುರಾಗವು ಅಕ್ಷಯವಾಗಲಿ
ನಿಮ್ಮ ಅನುಬಂಧವು ಜೊತೆಗೇ ಸಾಗಲಿ
ಹಗುರವಾದ ಮನಸು ಹೊತ್ತು ಸಮಯ ಸವೆಸಿದಂತೆ
ಅಂತ್ಯವಾಗುತಿರಲಿ ನಿಮ್ಮ ಸಕಲ ಕಷ್ಟ ಚಿಂತೆ
ಒಲವಾ ಮಳೆ ಸುರಿಯುತ್ತಲೇ ಇರಲಿ ಬಾಳಲಿ
ಮೊಗ್ಗೆಲ್ಲವೂ ಹೂವಾಗುವ ತರವೇ
ಮನ ತುಂಬಲಿ ಮಮಕಾರದ ಸಾರವೇ
ರಂಜಿತ್ ಅನ್ನೇ ವನಿತಾ
ಮದುವೆ ಆಗ್ತಾರಂತ
ಹಂಚಿಯಾಗಿದೆ ಲಗ್ನ ಪತ್ರಿಕೆ
ಮಡಿಲಲ್ಲಿ ಒಂದು, ತೆಕ್ಕೇಲಿ ಒಂದು
ಮಗು ಎರಡು ಬಂದು, ನಲಿಬೇಕು ಎಂದೂ
ಶ್ರುತಿ ಸೇರಲಿ ಪ್ರತಿ ಸಲ್ಲಾಪವು
ಹೊಸ ಕೃತಿಯಾಗಲಿ ನಿಮ್ಮ ದಾಂಪತ್ಯವು
ಮುದದಿ ಎಂದೂ ಸೇರಿ, ಲೋಕ ಮೆಚ್ಚುವಂತೆ ಬಾಳಿ
ಸಂಸಾರ ಸಹಿತ ಎಂದೂ ಸುಖದಿ ಮಿಂದು ಏಳಿ
ಕನಸೆಲ್ಲವೂ ನನಸಾಗುವಾ ಘಳಿಗೆ ಕಾಣಿರಿ
ನಿಮ್ಮ ಜೋಡಿಯ ಹರಸುತ್ತಿರೆ ಸುರರು
ವರ ನೀಡಲಿ ವರ ನೀಡುವಾ ದೇವರು ...