Tuesday, January 26, 2021

ಚಿರಂಜೀವಿ ರಾಘವೇಂದ್ರ


                ನಾನು ದೇವರು!!! ಅಂದರೆ ರಾಜ್ ಕುಮಾರ್ ಅಭಿಮಾನಿ. ರಾಜ್ , ಅವರ ಅಭಿಮಾನಿಗಳನ್ನು 'ದೇವರು' ಎಂದು ಕರೆಯುತ್ತಿದ್ದರಿಂದ, ನಾನು ಕೂಡ ದೇವರು . YES ; I am GOD, But not that Great!!!

                ಆದರೆ, ನನ್ನ ಅಭಿಮಾನ ರಾಜ್ಕುಮಾರ್ರಿಗೆ ಅಷ್ಟೇ ಸೀಮಿತ ಆಯ್ತು ; ಅವರ ಮಕ್ಕಳಿಗೆ ವಿಸ್ತರಿಸಲಿಲ್ಲ . ಕಾರಣ , ಅವರ್ಯಾರೂ ರಾಜ್ ರಷ್ಟು ಅದ್ಭುತವೇನಲ್ಲ ಅಂತಷ್ಟೇ ; ಎಷ್ಟೇ ಆದರೂ ವರನಟನಲ್ಲವೇ... ಆದರೂ ಇತ್ತೀಚಿಗೆ ರಾಘವೇಂದ್ರ ರಾಜಕುಮಾರ್ ಬಗ್ಗೆ ವಿಶೇಷ ಅಭಿಮಾನ ಹುಟ್ಟುತ್ತಿದೆ. ಹುಬ್ಬೇರಿಸುವ ಮುನ್ನ ಕಾರಣವಂ ಕೇಳಿ . 

                ರಾರಾ (ರಾಘವೇಂದ್ರ ರಾಜಕುಮಾರ್) ಅವರ ಮೊದಲ ಚಿತ್ರ 'ಚಿರಂಜೀವಿ ಸುಧಾಕರ' ಅಷ್ಟಾಗಿ ಓಡಲಿಲ್ಲ . ಆದರೆ , ಅವರ ತಂದೆಯ (ಇವರನ್ನು ಪರಿಗಣಿಸುವುದೇ ಅಪರಾಧ), ಅಣ್ಣನ , ತಮ್ಮನ ಮೊದಲ ಚಿತ್ರ ಭರ್ಜರಿ ಪ್ರದರ್ಶನ ಕಂಡಿದ್ದವು . ನಂತರ ರಾರಾರ ಎರಡು ಚಿತ್ರಗಳು ಒಳ್ಳೆಯ ಯಶಸ್ಸು ಪಡೆದವು. ಆಗ, ರಾರಾಗೆ ಆಗಿದ್ದು - ಹೃದಯಾಸ್ತಮ್ಭನ ... HEARTATTACK !!!!! ಕಬ್ಬಿಣ ಕಾಯುವಾಗ ಕುಲುಮೆಗೆ ನೀರು ಹಾಕಿದಂತಾಯ್ತು . ನಂತರ ಆರೋಗ್ಯದಲ್ಲಿ ಚೇತರಿಕೆ ಹೊಂದಿ ಮತ್ತೆ ಸಿನಿಮಾಗಳಲ್ಲಿ ಅಭಿನಯಿಸಲು ಶುರುಮಾಡಿದರು . ಆದರೆ, ಅವರ ಅಭಿಮಾನಿ ಬಳಗ ಹಿಗ್ಗುವಂತಹ ಯಾವ ಚಿತ್ರವೂ ಯಶಸ್ವಿ ಆಗಲಿಲ್ಲ . ಆಗ, ತಮ್ಮನ ರಂಗಪ್ರವೇಶವಾಯಿತು . ರಾರಾ , ಅಭಿನಯದಿಂದ ದೂರಾಗಿ ಚಿತ್ರ ನಿರ್ಮಾಣದ ಕಡೆ ತೊಡಗಿ ನೇಪಥ್ಯಕ್ಕೆ ಸರಿದರು . ಆಗ, ಅವರ ಆಧಾರಸ್ತoಭಗಳಾಗಿದ್ದ ವರದಪ್ಪ, ರಾಜಕುಮಾರ್ , ಕೆಲ ತಿಂಗಳಅಂತರದಲ್ಲಿ ಅಸ್ತಂಗತರಾದರು. ನಂತರ ರಾರಾರಿಗೆ ಲಕ್ವಾ ಹೊಡೆದು ಸುಲಲಿತ ಚಲನಹೀನರಾದರು . 

               ಇದಿಷ್ಟು ಘಟನೆಗಳನ್ನು ಅವಲೋಕಿಸಿದಾಗ ಅನ್ನಿಸುವುದು , ರಾರಾಗೆ ಖಿನ್ನತೆಗೆ ಹೋಗುವ ಎಲ್ಲಾ  ಕಾರಣಗಳೂ ಇದ್ದವು . ಆದರೂ ಅವರು, ಅವೆಲ್ಲವುಗಳಿಂದ ವಿಮುಖರಾಗಿ, ಚೇತೋಹಾರಿಯಾಗಿ ಮಾತಾಡುತ್ತಾರೆ. ಎಲ್ಲೂ ತಮ್ಮ ದುಃಖವನ್ನು ಹೇಳಿಕೊಳ್ಳದೇ , ಯಾರ ಕರುಣೆಯನ್ನೂ ಬೇಡದೇ , ಬರಿ ಸಂತೋಷಭರಿತ ಮಾತನ್ನೇ ಆಡುವರು . ತಮ್ಮ ಅಂಗವೈಕಲ್ಯವನ್ನು ಮರೆಮಾಚದೇ , ನಿರ್ಭೀತರಾಗಿ ತೆರೆಯ ಮೇಲೆ ಬರುತ್ತಾರೆ . "ಇನ್ನು ಸ್ವಲ್ಪ ದಿನಗಳಲ್ಲಿ ಸಿಕ್ಸ್ ಪ್ಯಾಕ್ ಮಾಡ್ಕೋತೀನಿ" ಅಂತಾರೆ!!! ಎಂತಹಾ ಜೀವನೋತ್ಸಹಾ !!!!

                ರವಿ ಚೆನ್ನಣ್ಣನವರ್ ಹೇಳುವ ಹಾಗೆ 'ದೇವರು, ಅವರವರ ಶಕ್ತ್ಯಾನುಸಾರವಾಗಿ ಕಷ್ಟ ಕೊಡುತ್ತಾನೆ ' ಎನ್ನುವ ಮಾತು, ರಾರಾರ ವಿಷಯದಲ್ಲಿ ಬಹಳ ಸತ್ಯವೆನಿಸುತ್ತದೆ. ಎಲ್ಲಾ ರೀತಿಯ ಸೌಕರ್ಯಗಳಿದ್ದರೂ , ಎಲ್ಲಾ ತೆರೆನಾದ ಭೋಗಗಳನ್ನು ಅನುಭವಿಸಿದ್ದರೂ , ಯಾವುದೋ ವೈಫಲ್ಯಕ್ಕೆ , ಯಾವುದೋ ಜಟಿಲ ಸಮಸ್ಯೆಯಿಂದಾಗಿ ಖಿನ್ನತೆಗೆ ಹೋಗುವವರ ನಡುವೆ , ರಾಘವೇಂದ್ರ ರಾಜಕುಮಾರ್ ಅಪರೂಪದ ಅಪವಾದವಾಗಿ ನಿಲ್ಲುತ್ತಾರೆ . ಇಂತಹ ಅಪರೂಪಿಗಳು , ಸಮಾಜದಲ್ಲಿ ಸಾಕಷ್ಟು ಮಂದಿ ಇದ್ದಾರೆ. ಅವರೆಲ್ಲರ ಜೀವನೋತ್ಸಹದಿಂದ ಜನಸಾಮಾನ್ಯ ಸ್ಪೂರ್ತಿಹೊಂದಲಿ . ತಾಮಸ ಕಾರಣಗಳಿಂದ ಖಿನ್ನತೆಯ ಕೂಪಕ್ಕೆ ಜಾರುವವರಿಗೆ ರಾಘವೇಂದ್ರ ರಾಜಕುಮಾರರಂತವರು ಅದರಿಂದ ಹೊರಬರುವುದಕ್ಕೆ ಸಹಾಯವಾಗುವಂತಹ ಮೆಟ್ಟಿಲುಗಳಾಗಲಿ . ರಾಘವೇಂದ್ರ ರಾಜಕುಮಾರರಂತಹ ಸಮಾಧಾನಿಗಳು ಚಿರಂಜೀವಿಯಾಗಲಿ . 



Tuesday, June 12, 2018

ನೈವೇದ್ಯ

ನೈವೇದ್ಯ 

ಗುಡಿಯಲ್ಲಿರುವ ದೈವಕ್ಕೆ
ಹಣ್ಣು ಕಾಯಿ ಬೇಕಂತೆ.. 
ಮನೆಯೊಳಗಿರುವ ದೈವಕ್ಕೆ,
ತುಪ್ಪದ ದೀಪವೇ ಬೇಕಂತೆ.. 
ಗುಡಿಯೇ ಇರದ ದೈವವು ಅಮ್ಮ!!!
ಇವಳಿಗೆ,
ನಮ್ಮ ಸುಖದ ಸುದ್ದಿ ಸಾಕಂತೆ!!!!

~ಪವನ್ ಎಚ್.ಕೆ. 

Sunday, June 19, 2016

ಅಗಲಿದ ಆಪ್ತನಿಗೊಂದು ನುಡಿ ತರ್ಪಣ

ಅಂತಿಮ ವಿದಾಯ 


                         ಮಂಜೇಶ್ ಇನ್ನಿಲ್ಲ ಅನ್ನುವ ಸುದ್ದಿ, ಅರಗಿಸಿಕೊಳ್ಳಲು ಅಷ್ಟೇ ಅಲ್ಲ, ಅರ್ಥಮಾಡಿಕೊಳ್ಳಲೂ ಆಗುತ್ತಿಲ್ಲ. ಬಲು ಆರೊಗ್ಯವನ್ತನಾಗಿದ್ದರೂ, ಸ್ಥೂಲಕಾಯಿಯೂ ಆಗಿರದೆ ನೀಳಕಾಯಿಯೂ  ಆಗಿರದೆ, ಸುಂದರಕಾಯದವನಾಗಿದ್ದರೂ, ದಿಢೀರನೆ ಅಸುನೀಗಿದನೆಂದರೆ, ಇದು ದೇವರು ಮಾಡಿದ ಕೊಲೆಯೇ ಸರಿ.ಬದುಕಿ ನಂದಾದೀಪವಾಗಿ ಬೆಳಗಬೇಕಿದ್ದ ಗೆಳೆಯ, ನಂದಿ ಹೋಗಿದ್ದಾನೆ. 'ನೀರ ಮೇಲಣ ಗುಳ್ಳೆ' ಎಂಬ ಬೇಡದ ಸತ್ಯ ಅರಿವಾಗಿ, ಜೀವನದಲ್ಲಿನ  ಆಸಕ್ತಿಯೂ ಕ್ಷೀಣವಾಗಿ ಹೋಗಿದೆ. 
  
                        ಅವನ ಅನಿರೀಕ್ಷಿತ ನಿರ್ಗಮನ, ನನ್ನಂತಹ ಅವನ ಎಷ್ಟೋ ಸ್ನೇಹಿತರ ಜೀವನದಲ್ಲಿ ಮರೆಯಲಾಗದ ನೋವು, ತುಂಬಿಸಿಕೊಡಲಾಗದ  ನಷ್ಟ ಉಂಟುಮಾಡಿದೆ. ಅವರ ಕುಟುಂಬದವರ ನೋವು ಊಹಿಸಿಕೊಳ್ಳುವುದಕ್ಕೂ ಭಯವಾಗುತ್ತದೆ. ಈ ಕ್ಷಣಕ್ಕೂ ಅವನ ಹಸನ್ಮುಖ, ತುಂಟಾಟಗಳು, ವಾದಗಳು, ಅವನು ಗುನುಗುತ್ತಿದ್ದ ನಾದಗಳು, ವಿಚಾರಗಳು ಮನಸ್ಸಿನಲ್ಲೆಲ್ಲಾ ಆವರಿಸಿಕೊಂಡಿದೆ. ಅವನ ಇಲ್ಲದಿರುವಿಕೆಯನ್ನು ಸಹಿಸಿಕೊಂಡು, ಜೀವನ್ಮುಖಿಯಾಗಿ, ಮುಂದಿನ ಕಠೋರ ಬದುಕು ಸವೆಸಲು, ನಾನು ಮಾಡುತ್ತಿರುವ ಅನೇಕ ಪ್ರಯತ್ನಗಳಲ್ಲಿ ಒಂದು, ಈ ಚರಮ ಗೀತೆ.



ಗೆಳೆಯನು ಮರಣಿಸಿದ 
ನಲ್ಮೆಯ ಗೆಳೆಯನು ಮರಣಿಸಿದ
ಕಂಪನು ಸೂಸುತ ನಲಿಯುವ ಹೊತ್ತಲಿ 
ದೇವನೇ ಮುದುಡಿಸಿದ 
ಜೀವದ ಖುಷಿಯನು ಕರಗಿಸಿದ 

ಆಶಾಭಾವಕೆ ಆಸ್ಪದವಿಲ್ಲ 
ನೆನೆಯದೇ ನಿನ್ನ ಮನ ಮಣಿಯುವುದಿಲ್ಲ 
ಬದುಕೇ ದೊಡ್ಡದು ಎಂದರೂ ಬುದ್ದಿ 
ಅಶ್ರುಧಾರೆಯು ನಿಲ್ಲುತಲಿಲ್ಲ 

ಸಾಧ್ಯವಾಗದು  ಮರೆಯಲು ನಿನ್ನ 
ಸಾಧುಯೆನಿಸದು ನಿನ್ನಯ ಮರಣ 
ನಿನ್ನಾ ಹೊರತು ಬದುಕ ಸವೆಸಲು 
ಕೂಡಿಸುತಿರುವೆ ಎಲ್ಲಾ ಕಾರಣ 

ಮುಗಿದಿದೆ ಬದುಕಿನ ಸುಂದರ ಅಧ್ಯಾಯ 
ಮುದ ನೀಡುತಾ ಮನ ಗೆದ್ದಿದ್ದ ಗೆಳೆಯಾ 
ನಿನಗಿದೋ ನನ್ನ ಅಂತಿಮ ವಿದಾಯ 

ಆತ್ಮೀಯ ಗೆಳೆಯ ಮಂಜೇಶ 
ನಿನ್ನಾ ನೆನಪುಗಳ ಚಲಚ್ಚಿತ್ರ 
ಎಂದಿಗೂ ಸಶೇಷ...... 




ಮುಖ ಜೀವನದ ಕಡೆ ಇದ್ದರೂ, ಪಯಣ ಮಾತ್ರ ಮರಣದ ಕಡೆಗೇ .... 

Friday, May 2, 2014

ತೋಚಿದ್ದು-ಗೀಚಿದ್ದು

ತೋಚಿದ್ದು-ಗೀಚಿದ್ದು

ಸೋಂಬೇರಿ ಸೊಲ್ಲು 

ಬೇಗ ಏಳಬೇಕೆಂದು, ಇಟ್ಟೆ ನಾ ಕರೆಗಂಟೆ 
ಬಡಿದಾಗ ಮಲಗಿದೆ; ಇಂಥಾ ಚಳಿಯಲೇಳಲುಂಟೇ !!!
ಬೆಳಗು ಅದೇ, ಬೈಗು ಅದೇ; ಮಾಡುವುದೇನಿದೆ ಎದ್ದು,
ಬವಣೆಯಲಿ ಬೆಂದ ಬದುಕಿಗೆ, ಸುಖನಿದ್ದೆಯೇ ಮದ್ದು !!

ಹೇಗಿದ್ದ ಹೇಗಾದ 

ಮದುವೆ ಆಗೋ ತನಕ 
ನಮ್ ಹುಡ್ಗ ಭಕ್ತವತ್ಸಲ.... 
ಮದುವೆ ಆಗೋ ತನಕ 
ನಮ್ ಹುಡ್ಗ ಭಕ್ತವತ್ಸಲ..... 
ಮದುವೆ ಆದನಂತರ,
ಕೈಗೇ ಸಿಗಲ್ಲಾ !!!!

ಕಾಲ ಕೂಡಿ ಬಂದಾಗ 

ನೇಸರಮುಳುಗಿ ಉದಯಿಸುವುದರೊಳಗೆ 
ನಿಶ್ಚಯವಾಗಿ ಹೋಗಿದೆ ನನ್ನ ಮದುವೆ !!!!                  
ಮಾತು, ಮೆಚ್ಚುಗೆ ಆಗಿದೆ ವಿನಿಮಯ 
ಮನ ಮಿಡಿದಿರಲು ಸಂದಿದೆ ಸುಸಮಯ 
ಬಂದುದನೆದುರಿಸಿ ಬದುಕುವ ಹಂಬಲ
ಹಾರೈಸುತಲಿ ನೀಡಿರಿ ಬೆಂಬಲ

ITS YOURS


Whenever I hear SMS alert,
My ear says, its yours!!!
Whenever I see Gtalk ping,
My eyes says, its yours!!!
My heart rate has gone up since I met you
Listen to it, the name it chants is YOURS!!!!!

Good Night


Thought of sending a rare SMS
Hence surfed net to get one right!!
Then abandoned that idea, cos
I had to just say Good Night!!!
                                               

ಬೆಲೆ ಏರಿಕೆ

ಯಾರದ್ದಾದರೇನು ಸರಕಾರ!!
ಯಾರಿದ್ದರೇನು ಅದರ ಸರದಾರ!!
ಬೆಲೆಯೇರಿಕೆಯ ಬಾಣಲೆಗೆ ಬಿದ್ದು ಬೇಯುವುದು
ಎಂದಿಗೂ ಮಧ್ಯಮ ವರ್ಗದ ಸಂಸಾರ !!!    



Sunday, February 23, 2014

ಪ್ರೇಮ ಪರಿಚಿತ



ಪ್ರೇಮ ಪರಿಚಿತ

ಪ್ರೀತಿಯ ಸುಮವು ಮನದರಳಿರಲು 
ನಿನ್ನದೇ ಧ್ಯಾನ ದಿನ ಪ್ರತಿ ಹಗಲು   
ಗುನುಗಿದೆ ಎಲ್ಲೆಡೆ ಮಂಜುಳ ಗಾನ 
ಒಲವಿನ ಮೌನವು ಮಾತಾಡಿರಲು

ನನ್ನಲಿ ಹುರುಪು ಇಮ್ಮಡಿಸಿಹುದು
ಬಾಳಲಿ ನೀನು ಬಂದಾಗಿಂದ
ಸಂತೋಷದ ಸೆಲೆ  ಚಿಮ್ಮುತಲಿಹುದು
ಪ್ರೀತಿಯ ಪರಿಚಯವಾದಾಗಿಂದ 

ಭಾವಕೆ ಭಾಷೆಯು ಸಾಲುತ್ತಿಲ್ಲ 
ಕಾವ್ಯಕೆ ಪದಗಳು ಒದಗುತ್ತಿಲ್ಲ 
ನಿನ್ನಯ ಬಿಂಬ ಕಣ್ತುಂಬಿರಲು 
 ಬೇರೆಯ ಸೃಷ್ಟಿ ಕಾಣುತ್ತಿಲ್ಲ

ಮನವಿದು ಪಡೆದಿದೆ ಹಕ್ಕಿಯ ಹಗುರ 
ವಾಸ್ತವ ಅನಿಸಿದೆ ಇನ್ನೂ ಮಧುರ 
ಭವಿತದ ಭರವಸೆ ಭವ್ಯವಾಗಿರೆ  
ಜೊತೆಯಲಿ ಮುಂದೆ ನುಗ್ಗುವ ಬಾರಾ ।।

ಎನ್ನ ಮನದನ್ನೆ 

Thursday, October 24, 2013

ಶುಭ ಹಾರೈಕೆ

ಶುಭ ಹಾರೈಕೆ 



"ಮಗಾ, ನನ್ ಮದುವೆ ಸೆಟ್ ಆಯ್ತು. ಹುಡುಗಿ ಹೆಸ್ರು ವನಿತಾ ಅಂತ ಮಗಾ"

ದೂರವಾಣಿಯಲ್ಲಿ ರಂಜಿತ್ ಈ ಮಾತನ್ನ ನುಡಿದಾಗ, ಅವನಿಗಾಗಿದ್ದ ಸಂತೋಷ ನಾ ಊಹಿಸಬಲ್ಲೆ. ಇಲ್ಲಿವರೆಗೂ, ಅವರ ತಾಯಿಗೆ ಒಳ್ಳೆ ಮಗನಾಗಿ, ಅಕ್ಕಂದರಿಗೆ ಒಳ್ಳೆ ತಮ್ಮನಾಗಿ, cousinsಗೆ  ಒಳ್ಳೆ ಅಣ್ಣನಾಗಿ, ನನ್ನಂತವರಿಗೆ ಪರಮಾಪ್ತ ಗೆಳೆಯನಾಗಿ, ಪ್ರತಿ ಸಂಬಂಧವನ್ನು ಅತ್ಯುತ್ಕೃಷ್ಟವಾಗಿ ನಿಭಾಯಿಸಿಕೊಂಡು ಬಂದಿರುವ ರಂಜಿತ್, ಈಗ ವನಿತಾರ ಗಂಡನಾಗಿ, ಯಾವ ಹೊಸ ಮಾದರಿ ಹುಟ್ಟುಹಾಕುವನೆಂದು ನೆನೆದು ರೋಮಾಂಚನವಾಯಿತು.

ಹೊಸ ಬಾಳಿನ ಹೊಸಿಲನು ಈಗಷ್ಟೇ ದಾಟಿರುವ ನವದಂಪತಿಗಳಿಗೆ, ಹಾಡಿನ ರೂಪದಲ್ಲಿ ಹಾರೈಸುವ ಪ್ರಯತ್ನ ನನ್ನದು.ಸಿನಿಮಾ ಹಾಡು ಅಂದರೆ ಇಷ್ಟ ಪಡುವ ರಂಜಿತನಿಗೆ, ಸಿನಿಮಾ ಹಾಡಿನ ರೂಪದಲ್ಲೇ ನನ್ನ ಹಾರೈಕೆ... ಇದೋ ..

("ಸಂಜು ಮತ್ತು ಗೀತಾ" ಹಾಡಿನ ಧಾಟಿ)

ರಂಜಿತ್ ಮತ್ತು ವನಿತಾ 
ಸೇರಬೇಕು ಅಂತ 
 ಬರೆದಾಗಿದೆ ಲಗ್ನ ಪತ್ರಿಕೆ 

ಖುಷಿ ಎಂದಿಗಿಂತಾ 
ದುಪ್ಪಟ್ಟಾಗಲಂತ 
ನಮ್ಮೆಲ್ಲರ ಶುಭ ಹಾರೈಕೆ 

ನಗುವೆಂಬ ಹೂವನ್ನು, ಮುಡಿಯಲಿ ನಿಮ್ಮ ಬದುಕಿನ್ನು 
ಆನಂದ ಬೆಳಗಿರಲಿ, ಚೆಲ್ಲುತ ನಿಮ್ಮ ಹೊಳಪನ್ನು 

ಮಧುರ  ಹನಿ ಮಧುವಾಗುವಾ ತರವೇ 
ಸುಖ ಸೇರುತಾ ಸೊಗಸಾಗಲಿ ಬಾಳುವೆ

ರಂಜಿತ್ ಮತ್ತು ವನಿತಾ 
ಸೇರಬೇಕು ಅಂತ 
 ಬರೆದಾಗಿದೆ ಲಗ್ನ ಪತ್ರಿಕೆ 

ಸಂಸಾರದಲ್ಲಿ ಸುಖವೊಂದೇ ಇರಲಿ 
ಉತ್ಸಾಹವೆಂದೂ ಚಿಮ್ಮುತ್ತ ಬರಲಿ 
ಅನುರಾಗವು ಅಕ್ಷಯವಾಗಲಿ 
ನಿಮ್ಮ ಅನುಬಂಧವು ಜೊತೆಗೇ ಸಾಗಲಿ 
ಹಗುರವಾದ ಮನಸು ಹೊತ್ತು ಸಮಯ ಸವೆಸಿದಂತೆ 
ಅಂತ್ಯವಾಗುತಿರಲಿ ನಿಮ್ಮ ಸಕಲ ಕಷ್ಟ ಚಿಂತೆ 
ಒಲವಾ ಮಳೆ ಸುರಿಯುತ್ತಲೇ ಇರಲಿ ಬಾಳಲಿ 

ಮೊಗ್ಗೆಲ್ಲವೂ ಹೂವಾಗುವ ತರವೇ 
ಮನ ತುಂಬಲಿ ಮಮಕಾರದ ಸಾರವೇ 

ರಂಜಿತ್ ಅನ್ನೇ ವನಿತಾ 
ಮದುವೆ ಆಗ್ತಾರಂತ 
ಹಂಚಿಯಾಗಿದೆ ಲಗ್ನ ಪತ್ರಿಕೆ 

ಮಡಿಲಲ್ಲಿ ಒಂದು, ತೆಕ್ಕೇಲಿ ಒಂದು 
ಮಗು ಎರಡು ಬಂದು, ನಲಿಬೇಕು ಎಂದೂ 
ಶ್ರುತಿ ಸೇರಲಿ ಪ್ರತಿ ಸಲ್ಲಾಪವು 
ಹೊಸ ಕೃತಿಯಾಗಲಿ ನಿಮ್ಮ ದಾಂಪತ್ಯವು 
ಮುದದಿ ಎಂದೂ ಸೇರಿ, ಲೋಕ ಮೆಚ್ಚುವಂತೆ ಬಾಳಿ 
ಸಂಸಾರ ಸಹಿತ ಎಂದೂ ಸುಖದಿ ಮಿಂದು ಏಳಿ 
ಕನಸೆಲ್ಲವೂ ನನಸಾಗುವಾ ಘಳಿಗೆ ಕಾಣಿರಿ 
ನಿಮ್ಮ ಜೋಡಿಯ ಹರಸುತ್ತಿರೆ ಸುರರು 
ವರ ನೀಡಲಿ ವರ ನೀಡುವಾ ದೇವರು ... 


Friday, July 26, 2013

Tum hi ho aashique- ಕನ್ನಡ ಭಾಷಾಂತರ

Since the trip of pondicherry, I wanted to write Kannada version for the song 'Tum hi ho' from aashique 2, not because the song was good, but because it looked easy in beginning. 

Below is not a great one, but definitely not the as-is translation of the song. Eventhough original song intended to show the affection, my version turned out to show the pain of separation. 


ನಿನ್ನಾ ವಿನಹ ಕಾಡಿದೆ ವಿರಹ 
ಕಾಡದೆ ಸನಿಹಕೆ ಬಾರೆ ಸಖಿ 
ಮನದಾ ಪುಟದಲಿ ನಿನ್ನದೇ ಬರಹ 
ಪಠಿಸುತ  ಒಮ್ಮೆಲೆ ಆದೆ ಸುಖಿ 

ಸೊರಗಿದೆ ಈ ಹೂಮನ 
ಬಯಸುತ ನಿನ್ನ ತಂಪನ 
ನಡುಗಿದೆ ನನ್ನ ಮೈಮನ 
ಕರುಣಿಸು ಆಲಿಂಗನ 

ಬಾನಲಿ ಮೂಡಿದ ನಕ್ಷತ್ರದಲಿ 
ನಿನ್ನಯ ವದನ ಕಾಣುತಿದೆ 
ತೋಳಲಿ ನಿನ್ನ ಬಳಸುವೆನೆಂದು 
ನನ್ನಯ  ಕರವು ಬೇಡುತಿದೆ 

ಉಸಿರಲಿ ನಿನ್ನ ಹೆಸರಿರುವಾಗ 
ಮರೆಯಲಿ ಹೇಗೆ ನಿನ್ನಾ 

ಸೊರಗಿದೆ ಈ ಹೂಮನ 
ಬಯಸುತ ನಿನ್ನ ತಂಪನ 
ನಡುಗಿದೆ ನನ್ನ ಮೈಮನ 
ಕರುಣಿಸು ಆಲಿಂಗನ

ಕಂಗೆಟ್ಟಿಹೆ ಅನು ಕ್ಷಣವು ನೀ ಬಾರದೆ ಬಡಿಯುತ್ತಿದೆ ನನ್ನ 
ಹೃದಯವು ನಿನ್ನ ಗಾನ  ಬೆಂಬಿಡದೆ ಬಯಸುತ್ತ ನಿನ್ನ 
ಬಳಿ ಬಾ ಗೆಳತಿ ನಾ ಚಡಪಡಿಸಿಹೆನು 
ಸುರಿಸು ಅನುರಾಗವ 

ಕೇಳೆನು, ನಾ ತಾಳೆನು 
ಅನುತಾಪವ ನಾ ಸಹಿಸೆನು 
ಹೃದಯವು ಹಾಳಾಗಿದೆ 
ಸರಿಪಡಿಸುನೀಡಿ ನೀ ಒಲವನು 

ಸೊರಗಿದೆ ಈ ಹೂಮನ 
ಬಯಸುತ ನಿನ್ನ ತಂಪನ 
ನಡುಗಿದೆ ನನ್ನ ಮೈಮನ 
ಕರುಣಿಸು ಆಲಿಂಗನ