ನಾನು ದೇವರು!!! ಅಂದರೆ ರಾಜ್ ಕುಮಾರ್ ಅಭಿಮಾನಿ. ರಾಜ್ , ಅವರ ಅಭಿಮಾನಿಗಳನ್ನು 'ದೇವರು' ಎಂದು ಕರೆಯುತ್ತಿದ್ದರಿಂದ, ನಾನು ಕೂಡ ದೇವರು . YES ; I am GOD, But not that Great!!!
ಆದರೆ, ನನ್ನ ಅಭಿಮಾನ ರಾಜ್ಕುಮಾರ್ರಿಗೆ ಅಷ್ಟೇ ಸೀಮಿತ ಆಯ್ತು ; ಅವರ ಮಕ್ಕಳಿಗೆ ವಿಸ್ತರಿಸಲಿಲ್ಲ . ಕಾರಣ , ಅವರ್ಯಾರೂ ರಾಜ್ ರಷ್ಟು ಅದ್ಭುತವೇನಲ್ಲ ಅಂತಷ್ಟೇ ; ಎಷ್ಟೇ ಆದರೂ ವರನಟನಲ್ಲವೇ... ಆದರೂ ಇತ್ತೀಚಿಗೆ ರಾಘವೇಂದ್ರ ರಾಜಕುಮಾರ್ ಬಗ್ಗೆ ವಿಶೇಷ ಅಭಿಮಾನ ಹುಟ್ಟುತ್ತಿದೆ. ಹುಬ್ಬೇರಿಸುವ ಮುನ್ನ ಕಾರಣವಂ ಕೇಳಿ .
ರಾರಾ (ರಾಘವೇಂದ್ರ ರಾಜಕುಮಾರ್) ಅವರ ಮೊದಲ ಚಿತ್ರ 'ಚಿರಂಜೀವಿ ಸುಧಾಕರ' ಅಷ್ಟಾಗಿ ಓಡಲಿಲ್ಲ . ಆದರೆ , ಅವರ ತಂದೆಯ (ಇವರನ್ನು ಪರಿಗಣಿಸುವುದೇ ಅಪರಾಧ), ಅಣ್ಣನ , ತಮ್ಮನ ಮೊದಲ ಚಿತ್ರ ಭರ್ಜರಿ ಪ್ರದರ್ಶನ ಕಂಡಿದ್ದವು . ನಂತರ ರಾರಾರ ಎರಡು ಚಿತ್ರಗಳು ಒಳ್ಳೆಯ ಯಶಸ್ಸು ಪಡೆದವು. ಆಗ, ರಾರಾಗೆ ಆಗಿದ್ದು - ಹೃದಯಾಸ್ತಮ್ಭನ ... HEARTATTACK !!!!! ಕಬ್ಬಿಣ ಕಾಯುವಾಗ ಕುಲುಮೆಗೆ ನೀರು ಹಾಕಿದಂತಾಯ್ತು . ನಂತರ ಆರೋಗ್ಯದಲ್ಲಿ ಚೇತರಿಕೆ ಹೊಂದಿ ಮತ್ತೆ ಸಿನಿಮಾಗಳಲ್ಲಿ ಅಭಿನಯಿಸಲು ಶುರುಮಾಡಿದರು . ಆದರೆ, ಅವರ ಅಭಿಮಾನಿ ಬಳಗ ಹಿಗ್ಗುವಂತಹ ಯಾವ ಚಿತ್ರವೂ ಯಶಸ್ವಿ ಆಗಲಿಲ್ಲ . ಆಗ, ತಮ್ಮನ ರಂಗಪ್ರವೇಶವಾಯಿತು . ರಾರಾ , ಅಭಿನಯದಿಂದ ದೂರಾಗಿ ಚಿತ್ರ ನಿರ್ಮಾಣದ ಕಡೆ ತೊಡಗಿ ನೇಪಥ್ಯಕ್ಕೆ ಸರಿದರು . ಆಗ, ಅವರ ಆಧಾರಸ್ತoಭಗಳಾಗಿದ್ದ ವರದಪ್ಪ, ರಾಜಕುಮಾರ್ , ಕೆಲ ತಿಂಗಳಅಂತರದಲ್ಲಿ ಅಸ್ತಂಗತರಾದರು. ನಂತರ ರಾರಾರಿಗೆ ಲಕ್ವಾ ಹೊಡೆದು ಸುಲಲಿತ ಚಲನಹೀನರಾದರು .
ಇದಿಷ್ಟು ಘಟನೆಗಳನ್ನು ಅವಲೋಕಿಸಿದಾಗ ಅನ್ನಿಸುವುದು , ರಾರಾಗೆ ಖಿನ್ನತೆಗೆ ಹೋಗುವ ಎಲ್ಲಾ ಕಾರಣಗಳೂ ಇದ್ದವು . ಆದರೂ ಅವರು, ಅವೆಲ್ಲವುಗಳಿಂದ ವಿಮುಖರಾಗಿ, ಚೇತೋಹಾರಿಯಾಗಿ ಮಾತಾಡುತ್ತಾರೆ. ಎಲ್ಲೂ ತಮ್ಮ ದುಃಖವನ್ನು ಹೇಳಿಕೊಳ್ಳದೇ , ಯಾರ ಕರುಣೆಯನ್ನೂ ಬೇಡದೇ , ಬರಿ ಸಂತೋಷಭರಿತ ಮಾತನ್ನೇ ಆಡುವರು . ತಮ್ಮ ಅಂಗವೈಕಲ್ಯವನ್ನು ಮರೆಮಾಚದೇ , ನಿರ್ಭೀತರಾಗಿ ತೆರೆಯ ಮೇಲೆ ಬರುತ್ತಾರೆ . "ಇನ್ನು ಸ್ವಲ್ಪ ದಿನಗಳಲ್ಲಿ ಸಿಕ್ಸ್ ಪ್ಯಾಕ್ ಮಾಡ್ಕೋತೀನಿ" ಅಂತಾರೆ!!! ಎಂತಹಾ ಜೀವನೋತ್ಸಹಾ !!!!
ರವಿ ಚೆನ್ನಣ್ಣನವರ್ ಹೇಳುವ ಹಾಗೆ 'ದೇವರು, ಅವರವರ ಶಕ್ತ್ಯಾನುಸಾರವಾಗಿ ಕಷ್ಟ ಕೊಡುತ್ತಾನೆ ' ಎನ್ನುವ ಮಾತು, ರಾರಾರ ವಿಷಯದಲ್ಲಿ ಬಹಳ ಸತ್ಯವೆನಿಸುತ್ತದೆ. ಎಲ್ಲಾ ರೀತಿಯ ಸೌಕರ್ಯಗಳಿದ್ದರೂ , ಎಲ್ಲಾ ತೆರೆನಾದ ಭೋಗಗಳನ್ನು ಅನುಭವಿಸಿದ್ದರೂ , ಯಾವುದೋ ವೈಫಲ್ಯಕ್ಕೆ , ಯಾವುದೋ ಜಟಿಲ ಸಮಸ್ಯೆಯಿಂದಾಗಿ ಖಿನ್ನತೆಗೆ ಹೋಗುವವರ ನಡುವೆ , ರಾಘವೇಂದ್ರ ರಾಜಕುಮಾರ್ ಅಪರೂಪದ ಅಪವಾದವಾಗಿ ನಿಲ್ಲುತ್ತಾರೆ . ಇಂತಹ ಅಪರೂಪಿಗಳು , ಸಮಾಜದಲ್ಲಿ ಸಾಕಷ್ಟು ಮಂದಿ ಇದ್ದಾರೆ. ಅವರೆಲ್ಲರ ಜೀವನೋತ್ಸಹದಿಂದ ಜನಸಾಮಾನ್ಯ ಸ್ಪೂರ್ತಿಹೊಂದಲಿ . ತಾಮಸ ಕಾರಣಗಳಿಂದ ಖಿನ್ನತೆಯ ಕೂಪಕ್ಕೆ ಜಾರುವವರಿಗೆ ರಾಘವೇಂದ್ರ ರಾಜಕುಮಾರರಂತವರು ಅದರಿಂದ ಹೊರಬರುವುದಕ್ಕೆ ಸಹಾಯವಾಗುವಂತಹ ಮೆಟ್ಟಿಲುಗಳಾಗಲಿ . ರಾಘವೇಂದ್ರ ರಾಜಕುಮಾರರಂತಹ ಸಮಾಧಾನಿಗಳು ಚಿರಂಜೀವಿಯಾಗಲಿ .