Sunday, June 19, 2016

ಅಗಲಿದ ಆಪ್ತನಿಗೊಂದು ನುಡಿ ತರ್ಪಣ

ಅಂತಿಮ ವಿದಾಯ 


                         ಮಂಜೇಶ್ ಇನ್ನಿಲ್ಲ ಅನ್ನುವ ಸುದ್ದಿ, ಅರಗಿಸಿಕೊಳ್ಳಲು ಅಷ್ಟೇ ಅಲ್ಲ, ಅರ್ಥಮಾಡಿಕೊಳ್ಳಲೂ ಆಗುತ್ತಿಲ್ಲ. ಬಲು ಆರೊಗ್ಯವನ್ತನಾಗಿದ್ದರೂ, ಸ್ಥೂಲಕಾಯಿಯೂ ಆಗಿರದೆ ನೀಳಕಾಯಿಯೂ  ಆಗಿರದೆ, ಸುಂದರಕಾಯದವನಾಗಿದ್ದರೂ, ದಿಢೀರನೆ ಅಸುನೀಗಿದನೆಂದರೆ, ಇದು ದೇವರು ಮಾಡಿದ ಕೊಲೆಯೇ ಸರಿ.ಬದುಕಿ ನಂದಾದೀಪವಾಗಿ ಬೆಳಗಬೇಕಿದ್ದ ಗೆಳೆಯ, ನಂದಿ ಹೋಗಿದ್ದಾನೆ. 'ನೀರ ಮೇಲಣ ಗುಳ್ಳೆ' ಎಂಬ ಬೇಡದ ಸತ್ಯ ಅರಿವಾಗಿ, ಜೀವನದಲ್ಲಿನ  ಆಸಕ್ತಿಯೂ ಕ್ಷೀಣವಾಗಿ ಹೋಗಿದೆ. 
  
                        ಅವನ ಅನಿರೀಕ್ಷಿತ ನಿರ್ಗಮನ, ನನ್ನಂತಹ ಅವನ ಎಷ್ಟೋ ಸ್ನೇಹಿತರ ಜೀವನದಲ್ಲಿ ಮರೆಯಲಾಗದ ನೋವು, ತುಂಬಿಸಿಕೊಡಲಾಗದ  ನಷ್ಟ ಉಂಟುಮಾಡಿದೆ. ಅವರ ಕುಟುಂಬದವರ ನೋವು ಊಹಿಸಿಕೊಳ್ಳುವುದಕ್ಕೂ ಭಯವಾಗುತ್ತದೆ. ಈ ಕ್ಷಣಕ್ಕೂ ಅವನ ಹಸನ್ಮುಖ, ತುಂಟಾಟಗಳು, ವಾದಗಳು, ಅವನು ಗುನುಗುತ್ತಿದ್ದ ನಾದಗಳು, ವಿಚಾರಗಳು ಮನಸ್ಸಿನಲ್ಲೆಲ್ಲಾ ಆವರಿಸಿಕೊಂಡಿದೆ. ಅವನ ಇಲ್ಲದಿರುವಿಕೆಯನ್ನು ಸಹಿಸಿಕೊಂಡು, ಜೀವನ್ಮುಖಿಯಾಗಿ, ಮುಂದಿನ ಕಠೋರ ಬದುಕು ಸವೆಸಲು, ನಾನು ಮಾಡುತ್ತಿರುವ ಅನೇಕ ಪ್ರಯತ್ನಗಳಲ್ಲಿ ಒಂದು, ಈ ಚರಮ ಗೀತೆ.



ಗೆಳೆಯನು ಮರಣಿಸಿದ 
ನಲ್ಮೆಯ ಗೆಳೆಯನು ಮರಣಿಸಿದ
ಕಂಪನು ಸೂಸುತ ನಲಿಯುವ ಹೊತ್ತಲಿ 
ದೇವನೇ ಮುದುಡಿಸಿದ 
ಜೀವದ ಖುಷಿಯನು ಕರಗಿಸಿದ 

ಆಶಾಭಾವಕೆ ಆಸ್ಪದವಿಲ್ಲ 
ನೆನೆಯದೇ ನಿನ್ನ ಮನ ಮಣಿಯುವುದಿಲ್ಲ 
ಬದುಕೇ ದೊಡ್ಡದು ಎಂದರೂ ಬುದ್ದಿ 
ಅಶ್ರುಧಾರೆಯು ನಿಲ್ಲುತಲಿಲ್ಲ 

ಸಾಧ್ಯವಾಗದು  ಮರೆಯಲು ನಿನ್ನ 
ಸಾಧುಯೆನಿಸದು ನಿನ್ನಯ ಮರಣ 
ನಿನ್ನಾ ಹೊರತು ಬದುಕ ಸವೆಸಲು 
ಕೂಡಿಸುತಿರುವೆ ಎಲ್ಲಾ ಕಾರಣ 

ಮುಗಿದಿದೆ ಬದುಕಿನ ಸುಂದರ ಅಧ್ಯಾಯ 
ಮುದ ನೀಡುತಾ ಮನ ಗೆದ್ದಿದ್ದ ಗೆಳೆಯಾ 
ನಿನಗಿದೋ ನನ್ನ ಅಂತಿಮ ವಿದಾಯ 

ಆತ್ಮೀಯ ಗೆಳೆಯ ಮಂಜೇಶ 
ನಿನ್ನಾ ನೆನಪುಗಳ ಚಲಚ್ಚಿತ್ರ 
ಎಂದಿಗೂ ಸಶೇಷ...... 




ಮುಖ ಜೀವನದ ಕಡೆ ಇದ್ದರೂ, ಪಯಣ ಮಾತ್ರ ಮರಣದ ಕಡೆಗೇ ....